
26th April 2025
ಮಲ್ಲಮ್ಮ ನುಡಿ ವಾರ್ತೆ
ಬಾಗಲಕೋಟೆ,ಏ.25-ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಯಶಸ್ವಿಗೊಳಿಸಲು ಮುಖ್ಯ ಮಾರ್ಗವೆಂದರೆ ಗ್ರಾಮಮಟ್ಟದಲ್ಲಿ ಯೋಜನೆಗಳ ಕುರಿತು ಪ್ರಚಾರ ಮಾಡುವುದಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಎಸ್.ಎಚ್. ತೆಕ್ಕೆನ್ನವರ ಹೇಳಿದರು.
ಜಿಲ್ಲಾ ಪಂಚಾಯತ ಹಳೆಯ ಸಭಾಭವನದಲ್ಲಿ ಶುಕ್ರವಾರ ಜರುಗಿದ ಪಂಚ ಗ್ಯಾರಂಟಿ ಯೋಜನೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನು ಒಟ್ಟುಗೂಡಿಸಿ ಅವರ ಮೂಲಕ ಯೋಜನೆಯ ಉಪಯೋಗ ಹಾಗೂ ದುರುಪಯೋಗಗಳನ್ನು ಕಂಡುಹಿಡಿಯಬಹುದು ಎಂದರು.
ಯುವ ನಿಧಿ ಹಾಗೂ ಗ್ರಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಸಮಿತಿಯ ಎಲ್ಲಾ ಸದಸ್ಯರಿಗೆ ನೀಡಲಾಗುವುದು. ಇದರಿಂದ ಫಲಾನುಭವಿಗಳ ಸಂಖ್ಯೆಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಜೊತೆಗೆ ಈ ಯೋಜನೆಯಿಂದ ದೊರೆಯುವ ಅನುಕೂಲ ಹಾಗೂ ಅನಾನುಕೂಲಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ. ಪರಿಣಾಮವಾಗಿ ಯೋಜನೆಯ ಉತ್ತಮ ಅನುಷ್ಟಾನಕ್ಕೆ ಅವಕಾಶ ಕಲ್ಪಿಸಬಹುದು ಎಂದು ಅವರು ಹೇಳಿದರು.
ಸಮಿತಿಯ ಎಲ್ಲಾ ಸದಸ್ಯರು ಗ್ರಾಮಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕ್ರಮಗಳನ್ನು ರೂಪಿಸಿ ಜನಸಾಮಾನ್ಯರಲ್ಲಿ ಪ್ರಚಾರ ಮಾಡಬೇಕು. ಜನರ ಸಮಸ್ಯೆಗಳನ್ನು ಅರಿತುಕೊಳ್ಳುವುದು ಹಾಗೂ ಅವರ ಅನುಭವಗಳನ್ನು ಸಂಗ್ರಹಿಸುವುದು ಅಗತ್ಯ, ಎಂದು ಅವರು ಸಲಹೆ ನೀಡಿದರು.
ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಕಾರ್ಯಕ್ರಮಗಳಲ್ಲಿ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಭಾಗವಹಿಸಿ ಯೋಜನೆಯ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಮನವಿ ಮಾಡಿದರಲ್ಲದೇ, ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ನಮಗೆ ಐದು ಯೋಜನೆಗಳ ಸಂಪೂರ್ಣ ಮಾಹಿತಿಯ ಅಗತ್ಯವಿದೆ. ಆದ್ದರಿಂದ ಮಾಹಿತಿ ಶೀಘ್ರದಲ್ಲಿ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಿತಿಯ ಎಲ್ಲಾ ಸದಸ್ಯರು, ತಾಲೂಕು ಅಧ್ಯಕ್ಷರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ